ಅಂಗರಚನಾಶಾಸ್ತ್ರ, ತುಲನಾತ್ಮಕ

ಇದು ಪ್ರಾಣಿಶಾಸ್ತ್ರದ ಶಾಖೆಗಳಲ್ಲಿ ಒಂದು. ವಿವಿಧ ಗುಂಪಿನ ಪ್ರಾಣಿಗಳ ಅಂಗರಚನೆಯನ್ನು ಅಧ್ಯಯನಮಾಡಿ ಅವುಗಳಲ್ಲಿ ಪರಸ್ಪರ ಹೋಲಿಕೆಯನ್ನು ತರುವುದೇ ಈ ಶಾಸ್ತ್ರದ ಪ್ರಧಾನ ಉದ್ದೇಶ. ಪ್ರಾಣಿಶಾಸ್ತ್ರಜ್ಞರು ಪ್ರಾಣಿಗಳನ್ನು ಅವುಗಳ ವಿಶಿಷ್ಟಲಕ್ಷಣಗಳ ಆಧಾರದ ಮೇಲೆ ಹತ್ತಿರ ಸಂಬಂಧವಿರುವುದನ್ನು ಗುಂಪುಗೂಡಿಸಿ ವರ್ಗೀಕರಿಸಿದ್ದಾರೆ. ಕ್ರಿಮಿಕೀಟಾದಿಗಳಿಂದ ಕೂಡಿದ ಬೆನ್ನೆಲುಬಿಲ್ಲದ (ಅಕಶೇರುಕ) ಪ್ರಾಣಿಗಳಲ್ಲಿ ಸಾಮ್ಯಕ್ಕಿಂತ ವೈಷಮ್ಯಗಳೇ ಹೆಚ್ಚು. ಆದರೂ ಒಂದು ವಂಶದ ಪ್ರಾಣಿಗಳಲ್ಲಿ ಹಲವು ಸಾಮ್ಯಗಳನ್ನು ಕಾಣಬಹುದು. ಉದಾಹರಣೆಗೆ ಸಂಧಿಪದಿಗಳಲ್ಲಿ ಸಖಂಡದೇಹ, ಕೈಟಿನ್ನಿನ ಕವಚ, ಪ್ರತಿ ಖಂಡದಲ್ಲೂ ಒಂದೊಂದು ಜೊತೆ ಕೀಲುಗಳಿಂದ ಕೂಡಿದ ಉಪಾಂಗಗಳು, ಅಧರದ ಜೋಡಿ ನರಹುರಿ - ಮೊದಲಾದ ಗುಣಲಕ್ಷಣಗಳು ಸಮಾನವಾಗಿವೆ. ಅಲ್ಲದೆ ಎರೆಹುಳು, ಜಿಗಣೆಗಳನ್ನೊಳಗೊಂಡ ವಲಯವಂತ ಪ್ರಾಣಿಗಳಲ್ಲಿ, ಕೆಲವು ಮೃದ್ವಂಗಿಗಳಲ್ಲಿ ಅಧರದ ಜೋಡಿ ನರಹುರಿಗಳಲ್ಲಿ ಸಾಮ್ಯವನ್ನು ಕಾಣಬಹುದು. ಆದರೆ ಮೀನು,ಕಪ್ಪೆಗಳನ್ನೊಳಗೊಂಡ ದ್ವಿಚರಿಗಳಾದ ಆಮೆ, ಹಲ್ಲಿ, ಹಾವು, ಮೊಸಳೆಗಳನ್ನೊಳಗೊಂಡ ಸರೀಸೃಪ, ಪಕ್ಷಿ ಮತ್ತು ಸಸ್ತನಿಗಳಲ್ಲಿ ಪ್ರತಿಯೊಂದು ಅಂಗಮಂಡಲದಲ್ಲಿಯೂ ವಿಚಾರಸಮ್ಮತವಾದ ಸಾಮ್ಯವನ್ನು ಕಾಣುತ್ತೇವೆ: ಅಂಗಮಂಡಲದಲ್ಲುಂಟಾಗಿರುವ ವಿಕಾಸಗತಿಯನ್ನು ನೋಡುತ್ತೇವೆ. ಈ ಕಾರಣದಿಂದಲೇ ವಿಕಾಸವಾದಿಗಳು ತಮ್ಮ ವಾದವನ್ನು ಪ್ರತಿಪಾದಿಸುವುದಕ್ಕೆ ಅಂಗರಚನಾತ್ಮಕ ಸಾಕ್ಷ್ಯಾಧಾರಗಳನ್ನು ಮುಂದಿಡುತ್ತಾರೆ.

ಆಂದ್ರೆ ವೆಸೇಲಿಯಸ್ಸನು 1543ರಲ್ಲಿ ಮಾನವನ ದೇಹವನ್ನು ವಿಚ್ಛೇದಿಸಿ, ಅಂಗರಚನೆಯ ಬಗ್ಗೆ ವಿವರಣೆಗಳನ್ನು ಕೊಟ್ಟ ಹನ್ನೆರಡು ವರ್ಷಗಳಮೇಲೆ, ಫ್ರಾನ್ಸಿನ ಪಿಯೇರ್ ಬೆಲೋನ್ (1517-1564) ಎಂಬ ಪ್ರಾಣಿಶಾಸ್ತ್ರಜ್ಞರು ಪಕ್ಷಿ ಮತ್ತು ಮಾನವನ ಅಸ್ಥಿಪಂಜರದ ಎಲುಬುಗಳನ್ನು ಒಂದರ ಪಕ್ಕದಲ್ಲಿ ಮತ್ತೊಂದನ್ನಿಟ್ಟು ಅಧ್ಯಯನಮಾಡಿ, ವಿವಿಧ ಎಲುಬುಗಳು ಒಂದೇ ಬಗೆಯಲ್ಲಿ ಅಳವಟ್ಟಿರುವುದನ್ನು ಮೊದಲಬಾರಿಗೆ ತೋರಿಸಿದನು. ಅವನ ಕಾಲದಿಂದ ಪ್ರಾರಂಭವಾದ ಈ ಶಾಸ್ತ್ರವನ್ನು ಗೊಯೆತೆ, ಓಕೆನ್ ಮೊದಲಾದವರು ತಾತ್ವಿಕ ಹಾಗೂ ವಿವರಣಾತ್ಮಕವಾಗಿ ಹತ್ತೊಂಭತ್ತನೆಯ ಶತಮಾನದವರೆಗೂ ಬೆಳೆಸಿಕೊಂಡು ಬಂದರು. ಈ ಶಾಸ್ತ್ರವು ಕೊನೆಗೆ ಚಾರಲ್ಸ್ ಡಾರ್ವಿನ್ನನ ಆರಿಜಿನ್ ಆಫ್ ಸ್ಪೀಷೀಸ್(1859) ಎಂಬ ಗ್ರಂಥದ ಪ್ರಕಟಣೆಯಾದ ಮೇಲೆ ಜೀವವಿಕಾಸಾಧ್ಯಯನದಲ್ಲಿ ಗಣ್ಯಸ್ಥಾನವನ್ನು ಪಡೆಯಿತು.ಈ ಕ್ಷೇತ್ರದಲ್ಲಿ ರೋಬೆರ್ಟ್ ವೀಡರ್ ಷೀಮ್ ಎಂಬುವನ ಕೊಡುಗೆ ಕಳಶಪ್ರಾಯವಾಗಿದೆ.

ಕಶೇರುಕದ ಯಾವ ಅಂಗಮಂಡಲವನ್ನೇ ತೆಗೆದುಕೊಂಡರೂ ಅದು ಒಂದು ನಿರ್ದಿಷ್ಟ ಮೂಲ ರಚನೆಯ ಮೇಲೆ ಆಧಾರಿತವಾಗಿರುವಂತಿದೆ. ಆದರೆ ಜೀವನದ ಚಟುವಟಿಕೆ, ಕಾರ್ಯನಿರ್ವಹಣೆಗೆ ತಕ್ಕಂತೆ ಅಂಗಗಳಲ್ಲಿ ಮಾರ್ಪಾಟಾಗಿರಬಹುದು ಅಥವಾ ಅಂಗದ ಕೆಲವು ಭಾಗಗಳು ನಶಿಸಿ ಹೋಗಿರಬಹುದು. ಬಾವಲಿ, ಪಕ್ಷಿ ಮತ್ತು ಗತಕಾಲದ ಟೆರೋಡಾಕ್ಟೈಲ ಎಂಬ ಹಾರುವ ಸರೀಸೃಪಗಳ ರೆಕ್ಕೆಯಲ್ಲೂ ರೆಕ್ಕೆಯ ಎಲುಬುಗಳ ವಿನ್ಯಾಸದಲ್ಲೂ ಸಾಮ್ಯವಿದೆ. ಅವೆಲ್ಲವೂ ಮೂಲಭೂತವಾದ ಭೂಚರ ಕಶೇರುಕದ ಮುಂದೋಳಿನ ಎಲುಬುಗಳ ವಿನ್ಯಾಸದ ಮಾರ್ಪಾಟೆಂಬುದನ್ನು ಸೂಚಿಸುವಂತಿದೆ. ಆದರೆ ಕೀಟದ ರೆಕ್ಕೆಗಳು ಕಾರ್ಯನಿರ್ವಹಣೆಯಲ್ಲಿ ಪಕ್ಷಿಯಂತೆ ಹಾರಲು ನೆರವಾಗುತ್ತವೆಯೇ ವಿನಾ ರೆಕ್ಕೆಯ ರಚನೆಯಲ್ಲಿ ಅಣುಮಾತ್ರವೂ ಹೋಲಿಕೆ ಕಂಡುಬರುವುದಿಲ್ಲ. ಇಷ್ಟೇ ಅಲ್ಲದೆ ಜೀವನದ ಕಾರ್ಯಚಟುವಟಿಕೆಗಳಿಗೆ ತಕ್ಕಂತೆ ನಡಿಗೆಗೆ (ಕಪ್ಪೆ, ಹಲ್ಲಿ, ಮೊಸಳೆ ಇತ್ಯಾದಿ), ಓಡುವುದಕ್ಕೆ (ನಾಯಿ, ಕುದುರೆ ಇತ್ಯಾದಿ), ಹಾರುವುದಕ್ಕೆ (ಪಕ್ಷಿ,ಬಾವಲಿ), ಈಜುವುದಕ್ಕೆ (ತಿಮಿಂಗಿಲ ಮೊದಲಾದುವು), ಅಗೆಯುವುದಕ್ಕೆ (ಪೋಲ್ ಇತ್ಯಾದಿ), ಹಿಡಿಯುವುದಕ್ಕೆ (ನರವಾನರ, ಮಂಗ ಮೊದಲಾದುವು), ನೆರವಾಗುವ ಎಲುಬುಗಳ ರಚನೆಯಲ್ಲಿ ಸ್ವಲ್ಪ ಮಾರ್ಪಾಟಾಗಿದ್ದರೂ ಮೂಲಭೂತ ಎಲುಬುಗಳ ವಿನ್ಯಾಸದಲ್ಲಿ ಮಾರ್ಪಾಟು ಕಂಡು ಬರುವುದಿಲ್ಲ.
ಆದರೆ ಇಂದಿನ ಮಾನವನ ಮುಂದೋಳು ಮತ್ತು ಕುದುರೆಯ ಮುಂಗಾಲುಗಳ ಎಲುಬುಗಳಲ್ಲಿ ಕೆಲವು ಸಾಮ್ಯಗಳಿವೆ. ಕೆಲವು ಎಲುಬುಗಳು ಮಾರ್ಪಾಟಾಗಿವೆಯಲ್ಲದೆ ಹಲವು ಮೂಳೆಗಳು ಲೋಪವಾಗಿವೆ. ಇಂಥ ಮಾರ್ಪಾಟು ಮತ್ತು ಲೋಪಗಳನ್ನು ಅರ್ಥಮಾಡಿ ಕೊಳ್ಳಬೇಕಾದರೆ ಇಂದಿನ ಕುದುರೆಗಳ ಪೂರ್ವೇತಿಹಾಸವನ್ನು ಆಧ್ಯಯನ ಮಾಡಬೇಕು. ಲುಪ್ತಜೀವಿ ಕುದುರೆಗಳಲ್ಲಿ ಕ್ರಮಕ್ರಮವಾಗಿ ಮುಂಗಾಲು ಹಿಂಗಾಲುಗಳ ಬೆರಳುಗಳ ಎಲುಬುಗಳು ನಶಿಸಿ ಕೊನೆಗೆ ಒಂದೇ ಬೆರಳು ಪ್ರಮುಖವಾಗಿ ಮಾರ್ಪಟ್ಟಿರುವುದನ್ನು ಕಾಣಬಹುದು.

ಪಳೆಯುಳಿಕೆಗಳ ಅಧ್ಯಯನದಿಂದ ಕಠಿಣಾಂಗಗಳ ಹೋಲಿಕೆಯನ್ನು ಅಧ್ಯಯನ ಮಾಡಬಹುದೇ ವಿನಾ ಮೃದ್ವಂಗಿಗಳ ರಚನೆಯ ಸಾಮ್ಯವನ್ನು ಕಂಡುಹಿಡಿಯುವುದಕ್ಕಾಗುವುದಿಲ್ಲ. ಅಂಥ ಸಾಮ್ಯವನ್ನು ಕಾಣಬೇಕಾದರೆ ಭ್ರೂಣಗಳ ಅಧ್ಯಯನ ಮಾಡಬೇಕು. ಭ್ರೂಣಶಾಸ್ತ್ರದ ಅಧ್ಯಯನದಿಂದ ಅಂಗರಚನೆಗಳ ಸಾಮ್ಯವನ್ನು ಪರೀಕ್ಷಿಸಿದರೆ ಸಾಮ್ಯ ಮತ್ತು ವಿಕಾಸಗಳನ್ನು ಕಾಣಬಹುದು; ಹೃದಯ ಮಿದುಳು ಮೊದಲಾದ ಮೃದ್ವಂಗಗಳ ವಿಕಾಸವನ್ನು ವಿವರಿಸಬಹುದು. ಅಲ್ಲದೆ ಮೀನು ಕಪ್ಪೆ ಸರೀಸೃಪ ಪಕ್ಷಿಗಳಲ್ಲಿ ಕಪಾಲ ಮತ್ತು ದವಡೆಗಳನ್ನು ಕೂಡಿಸಲು ಎರಡು ಕೀಲು ಎಲುಬುಗಳು ತಮ್ಮ ಮೂಲ ಕರ್ತವ್ಯವನ್ನು ಕಳೆದುಕೊಂಡು ಸಸ್ತನಿಯಲ್ಲಿ ಅವು ಹೇಗೆ ಧ್ವನಿತರಂಗಗಳನ್ನು ಕಿವಿ ತಮಟೆಯಿಂದ ಒಳಕಿವಿಗೆ ಸಾಗಿಸುವ ಎಲುಬು ಸರಪಳಿಯಾಗಿ ಮಾರ್ಪಾಟ್ಟು ಬ್ಭೆರೆಯ ಕೆಲಸವನ್ನು ಮಾಡುತ್ತವೆಯೆಂದು ತೋರಿಸಬಹುದು.        

(ಬಿ.ಎನ್.ಬಿ.)